Sunday 2 June 2013

ಸುಖ ಒಂದು ಅನುಭಾವ
ಕಾಡಿನ್ ಒಂದು ಬೆಳದಿಂಗಳ ರಾತ್ರಿ
ಕಾಡಿನಲ್ಲಿ ಒಂದು ಬೆಳದಿಂಗಳ ರಾತ್ರಿ ಕಳೆಯ ಬೇಕೆಂದು ಬಹುದಿನಗಳ ಬಯಕೆ. ಅಂತಹ ಒಂದು ಜಾಗ ಹುಡುಕುವಾಗ ಕಂಡಿದ್ದು ಇದೇ ಈ ಜಾಗ. ಬೆಂಗಳೂರಿನ ಈ ಕಾಂಕ್ರೀಟ್ ಕಾಡಿನಿಂದ ೨೫ ಕಿಮಿ ದೂರ ಜಿಗಿದರೆ ಒಂದು ದಟ್ಟ ಕಾಡು. ಬೆಂಗಳೂರಿಗೂ ಹಸಿರು ಕಾಡಿಗೂ ಎಲ್ಲಿ ಎಲ್ಲಿನ ಸಂಬಂಧ ಅಂತ ನಿಮಗೆ ಅನಿಸುತ್ತಿದೆಯಾ? ನಮ್ಮೂರಿನಿಂದ ೨೫ ಕಿಮಿ ದೂರದ ಬನ್ನೇರುಘಟ್ಟ ಹೇಗೊ ಏನೊ ಭೂಮಾಫಿಯಾ ಕಬಳಿಕೆಗೆ ಸಿಲುಕದೆ ಕಾಡುಕಾಡಾಗಿಯೇ ಉಳಿದಿದೆ. ಅಲ್ಲಿನ ಒಂದು ಸುಂದರ, ನಿರ್ಜನ, ಪ್ರಶಾಂತ ಬೆಳದಿಂಗಳ ರಾತ್ರಿ ನೆನಪಿನಲ್ಲಿ ಚಿರಸ್ಥಾಯಿ.
Forest resortನ ಲಾಗ್ ಕಾಟೇಜ ಒಂದು ಸುಸಜ್ಜಿತವಾದ ಗೂಡು. ಎತ್ತರವಾದ ಮರದ ದಿಮ್ಮಿಗಳ ಮೇಲೆ, ಅಡಿಕೆ ಮರದ ದಿಂಮ್ಮಿಗಳಿಂದ ಸುಂದರವಾಗಿ ಕಟ್ಟಲಾಗಿದೆ. ಹರ್ಬಿವೋರ್ ಪ್ರಾಣಿಗಳಿರುವ ಕಾಡಿನ ಅಳತೆಯಲ್ಲೇ ನಾಡಿನ ಪ್ರಾಣಿಗಳಿಗಾಗಿ ಕಟ್ಟಿದ ಗೂಡು. ನಾಡಿನ ಪ್ರಾಣಿಗಳ ರಕ್ಶಣೆಗಾಗಿ ಸುತ್ತಲೂ ಹಾಕಿದ ವಿದ್ಯುತ್ ಬೇಲಿ. ಹಿಂಸ್ರಮೃಗಗಳ ಅಂಜಿಕೆ ಇಲ್ಲದ ರಾತ್ರಿ. ನನಗಾಗಿಯೇ ಸಿದ್ದ ಪದಿಸಿದಂತೆ ಕಾಟೇಜಿನ ಎದುರಿನಲ್ಲಿ ಎರಡು ದೊಡ್ಡ ಮರಗಳಿಗೆ ಕಟ್ಟಿದ ಹತ್ತಿಯ ಹಗ್ಗದ ತೂಟ್ಟಿಲು. ಆ ಬೆಳಂಗಳಲ್ಲಿ ತೊಯ್ದುಹೋಗಿತ್ತು. ಅದನ್ನ ನೋಡುತ್ತಿದ್ದ ಹಾಗೇ ಅದರ ಮೇಲೆ ಮಲಗುವ ಆಸೆ ಬಲವಾಯಿತು. ನಿರುಮ್ಮಳವಾಗಿ ಮಲಗಿ ಮೇಲಿನ ಆಕಾಶ ನೋಡಿದಾಗ ಆಕಾಶಾಂದ್ರೆ ಹೀಗಿರುತ್ತಾ? ರಾತ್ರಿ ಅದರಲ್ಲೂ ಬೆಳದಿಂಗಳೆಂದರೆ ಇಶ್ಟ್ ಚೆನ್ನಾಗಿರತ್ತಾ?ಅಂತ ಅನಿಸಿತ್ತು.  ಬೆಂಗಳೂರಿನವಳಾದ ನನಗೆ, ಎತ್ತರದ ಸಿಮೆಂಟ್ ಕಟ್ಟಡಗಳ ನಡುವೆ ಚೂರುಪಾರು ಕಾಣುವ ಆಕಾಶ. ಯಾವಾಗಲು ಸೋಡಿಯಂ ದೀಪಗಳ ಕೆಂಪಿನಲ್ಲಿ ನೆನೆಯುತ್ತಾ ಬಿದ್ದಿರುವ ಆಕಾಶವೇ ಅಲ್ಲದ ಆಕಾಶ ನೋಡಿದಷ್ಷೇ ಗೊತ್ತು.  ಹಗ್ಗದ ತೊಟ್ಟಿಲ ಮೇಲೆ ರಾತ್ರಿಯೆಲ್ಲಾ, ಆಕಾಶದ್ ಕೆಳಗೆ, ಬೆಳದಿಂಗಳಲ್ಲಿ  ಬಿದ್ದು ಕೊಂಡಿರ ಬೇಕೆಂಬ ಹೆಬ್ಬಯಕೆ ಮೂಡಿದ್ದೇ ಹೀಗೆ.
ಮನಸ್ಸಿಗೆ ಅನ್ನಿಸಿದ್ದನ್ನ ಮಾಡದೆ ಇರೋಕ್ಕೆ ಆಗಲ್ವೇ? ಸರಿ. ಮೆಲ್ಲಗೆ ಹೋಗಿ ತೊಟ್ಟಿಲಲ್ಲಿ ಕಾಲು ಚಾಚಿ ಬಿದ್ದುಕೊಂಡೆ. ತಾಯಿಯ ಗರ್ಭದಲ್ಲಿ ನಿರ್ಯೋಚನೆಯಿಂದ ಮಲಗಿದ ಕಂದಮ್ಮನಂತೆ. ರಾತ್ರಿಯೆಲ್ಲಾ ನಾನೊಬ್ಬಳೇ ಹೀಗೆ ಮಲಗಿರಲು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟ ಪತಿ ರಮೇಶ್. ಕಾಟೇಜನ ವರಾಂಡದ ಬೆತ್ತದ ಕುರ್ಜಿಯ ಮೇಲೆ ಅರೆನಿದ್ದೆ ಮಾಡುತ್ತಾ ನನಗೆ ಕಾವಲು ಕಾಯುತ್ತಿದ್ದರು.. ನನ್ನಲ್ಲಿ ನೆಮ್ಮದಿಯ ಭಾವ.
ಸುತ್ತಲೂ ನಿಶಬ್ಧ. ಸುರಿಯುವ ಬೆಳದಿಂಗಳು. ಮುಸ್ಸಂಜೆ ಸಮಯ. ಬೀಸುವ ಗಾಳಿಯ ಉಯಿಲು ಕಿವಿಗಳಿಗೆ ಹಿಂದೂಸ್ತಾನಿ ಸಂಗೀತದಂತೆ ಅಪ್ಯಾಯ. ತೂಟ್ಟಿಲಲ್ಲಿ ಮುಖಮೇಲೆ ಮಾಡಿ ಅಂಗಾತ ಮಲಗಿದರೆ ಈ ಭೂಮಿಯ ದೃಶ್ಯವೇ ಬೇರೆ. ಆಕಾಶದ ಅನಂತಾನಂತ ವಿಶಾಲತೆ ಬೆಳ್ಳಿಕೊಡೆಯಂತೆ ಬಿಚ್ಚಿಕೊಂಡು ನನ್ನನ್ನಾವರಿಸಿದೆ. ತೊಟ್ಟಿಲ ಬದಿಯಲ್ಲಿ ದಟ್ಟವಾಗಿ ಬೆಳೆದ ಬಿದಿರ ಮೆಳೆ.ಗಾಳಿಗೆ ತೊಯ್ದಾಡುತ್ತಾ ತನ್ನದೇ ರಾಗದಲ್ಲಿ ಹಾಡುತ್ತಿದೆ. ನೊರೆಹಾಲ ಬೆಳದಿಂಗಳಲ್ಲಿ ಕಣ್ಣಿನ ಕ್ಯಾಮರಗೆ ಕಂಡ ದೃಶ್ಯ ಅದ್ಭುತ. ಆ ಹೊತ್ತಾದ ಸಂಜೆಯ ಸಮಯದಲ್ಲಿ ಬಿದಿರ ಮೆಳೆಯ ತುದಿಯಲ್ಲಿ ಒಂದು ಕೋತಿ.ಅದರ ಮೈಮೇಲೆ ಎದ್ದು ನಿಂತ ರೊಮಗಳು ಬೆಳದಿಂಗಳಿನಲ್ಲಿ ಹೊಳೆಯುತ್ತಿದೆ. ಚಂದಿರ ಕೋತಿಯನ್ನೂ ಕೂಡ ಸುಂದರವಾಗಿಸಿದ್ದ. ಕೋತಿತನ್ನ ಎರಡೂ ಕೈಗಳಿಂದ ಬಿದಿರ ಚಿಗುರನ್ನು ಕಿತ್ತು ಕಿತ್ತು ಬಾಯಿಗೆ ಬಿಡುವಿಲ್ಲದೆ ತುರಿಕಿಕೊಳ್ಳುತ್ತಿದೆ. ಎಷ್ಷೇ ಆಗಲಿ ಬೆಂಗಳೂರಿನ ಕೋತಿ ಅಲ್ವಾ? ನಮ್ಮಂತೆ ಅದಕ್ಕೂ late night supper ಅಂದರೆ ಇಷ್ಷ. ಡಯಟೀಶಿಯನ್ ಒಬ್ಬಳು ನೋಡುತ್ತಿದ್ದಾಳೆ ಅಂತ ಸಂಕೋಚ ಆಯಿತೋ ಏನೊ, ಚಂಗನೆ ಬಿದುರ ಮೆಳೆಗಳ ಮೇಲೆ ಹಾರುತ್ತಾ ಹಾರುತ್ತಾ ಕಾಡಿನಲ್ಲಿ ಮರೆಯಾಗಿ ಹೋಯಿತು.
ಇದೀಗ ಚಂದಿರ ಮತ್ತು ನಾನು ಇಬ್ಬರೇ. ಅಂಗಾತ ಬಿದ್ದಿದ್ದ ನನ್ನ ಮೇಲೆ ನೇರವಾಗಿ ಇದ್ದಾನೆ.ದಟ್ಟ ಮರಗಳ ಮೇಲೆ ಬಿದ್ದು ಹೊರಳಾಡುವ ಬೆಳದಿಂಗಳು. ಮರಗಳ ಎಲೆಗಳು ಬೆಳದಿಂಗಳಿನಲ್ಲಿ ಬೆಳ್ಳಿಯ ಎಲೆಗಳಂತೆ ಹೊಳೆಯುತ್ತಿದೆ. ಬೀಸುವ ಗಾಳಿ ತರುವ ಎಲ್ಲೆಲ್ಲೊ ಅರಳಿನಿಂತ ಕಾಡು ಹೂಗಳ ಪರಿಮಳ.ಕಾಡಿನ ನೂರಾರು ಮಾವಿನ ಮರಗಳಲ್ಲಿ ಹಣ್ಣಾಗಿ ನಿಂತ ಮಾವು, ಕಾಡು ಹೂವಿನ ಸುವಾಸನೆಯೊಂದಿಗೆ ಹಣ್ಣು ಸ್ಪರ್ದೆಗಿಳಿದಿತ್ತು. ಸಾದ್ಯವಾದಷ್ಷೂ ಈ ಪರಿಮಳವನ್ನು ಆಘ್ರಾಣಿಸಿ ಬಿಡುವ ಆಸೆ. ಇನ್ನೊ ಬೆಂಗ್ಳೂರಿನಲ್ಲಿ ಏನಿದ್ದರು ಪೆಟ್ರೋಲ್, ಡೀಸಲ್,ಮೊರಿಗಳದ್ದೇ ವಾಸನೆ. ಒಂದಿಷ್ಷು ಈ ಪರಿಮಳವನ್ನು ಗಂಟುಕಟ್ಟಿಕೊಂಡು ಹೋಗುವಂತಿದ್ದರೆ ಎಷ್ಷು ಚೆನ್ನಾಗಿತ್ತಲ್ಲವಾ?
ಬೆಳದಿಂಗಳ ನೀರವತೆ ಏನನ್ನೊ ಹೇಳುತ್ತಿದೆ. ’ಮೌನ ಮಾತನಾಡುತ್ತದೆ’ ಎನ್ನುವದಕ್ಕಿಂತ ಮೌನ ಹಾಡುತ್ತದೆ ಎನ್ನುವುದು ಇಲ್ಲಿನ ಈ ರಾತ್ರಿಗೆ ಸೂಕ್ತ. ಒಮ್ಮೆಲೇ ನನ್ನ ಬಲಬದಿ ಬಿಸಿಯಾದಂತೆ ಅನುಭವ.ಏನೊ ಬಿಸಿಗಾಳಿ ನನ್ನನ್ನು ತಟ್ಟಿದಂತೆ. ಹೆದರಿದ ನಾನು ಉಸಿರಾಡದೆ,ಅಲುಗಾಡದೆ ನಿಚ್ಛಳವಾಗಿ ಹಾಗೇ ತೊಟ್ಟಿಲಲ್ಲಿ ಅಂಗಾತ ಮಲಗಿದ್ದೆ. ದೈರ್ಯಮಾಡಿ ಕಣ್ಣಂಚಿನಲ್ಲಿ ಮೆಲ್ಲಗೆ ನೋಡಿದಾಗ........ ಸಾರ್ಥಕತೆಯ ಭಾವ. ನನ್ನ ಬಳಿ ಮುದ್ದಾದ ಜಿಂಕೆ. ತನ್ನ ವಿಶಾಲವಾದ ಕಣ್ಣಿನಿಂದ ನನ್ನನ್ನೇ ನೊಡುತ್ತಿದೆ. “ ನೀನು ನನಗೇನು ಹಿಂಸೆ ಮಾಡಲ್ಲಾ ಅಲ್ವಾ?’ ಕೇಳುತ್ತಿದೆ. ಬೆಳದಿಂಗಳ ಬಿಳುಪಿಗೆ ಅದರ ಮೇಲಿನ ಸುಂದರವಾದ ಚುಕ್ಕೆಗಳು ಪಳಪಳ ಹೊಳೆಯುತ್ತಿದೆ. ಉಸಿರಾಟಕ್ಕೆ ಅದರ ಎರಡೂ ಪಕ್ಕೆಗಳು ಏರಿಳಿಯುತ್ತಾ ಜೀವಂತ ದಂತದ ಬೊಂಬೆಯಂತೆ ಕಾಣುತ್ತಿದೆ. ಮೆಲ್ಲಗೆ ಕೈಯಿಂದ ತಡವಿ ತಬ್ಬಿಕೊಳ್ಳುವಾಸೆ. ಆದರೆ ಹೆದರಿ ಎಲ್ಲಿ ಓಡಿಹೋಗುವುದೂ ಎಂಬ ಆತಂಕ.ಸುಮ್ಮನೆ ಅದನ್ನೇ ನೋಡುತ್ತಾ ನಿಶ್ಛಲವಾಗಿ ಬಿಟ್ಟೆ. ಹಾಗೇ ಕಣ್ಣು ಹಾಯಿಸಿದ ಕಂಡಿದ್ದು.......ನಮ್ಮ ಕಾಟೇಜ್ನ ಕೆಳಗಿನ ಜಾಗ ಖಾಲಿ. ಬೆಳದಿಂಗಳಲ್ಲಿ ಸ್ಪಷ್ಷವಾಗಿ ಕಾಣುತ್ತಿದೆ.ಅಲ್ಲೆರಡು ಜಿಂಕೆಗಳು ತಮ್ಮ ಕೊಂಬುಗಳೂ ಕೂಡ ಅಲುಗಾಡದಂತೆ ಸ್ಥಿರವಾಗಿ ನಿಂತಿದೆ. ಎಳೆಯ ಮರದ ರೆಂಬೆಗಳು ಟಿಸಿಲೊಡೆದಂತೆ ಕಾಣುವ ಅದರ ಕೊಂಬುಗಳು ನೋಡಲು ಎಷ್ಷು ಚೆನ್ನ. ಮತ್ತೂ ಕಣ್ಣರಳಿಸಿ ನೊಡಿದಾಗ ಇನ್ನೆರಡು ಮರಿ ಜಿಂಕೆಗಳು ಅಲ್ಲೇ ಮಲಗಿ ಬಿಟ್ಟಿದೆ.ಬಹುಷಃ ಸಸ್ಯಾಹಾರಿಗಳಾಗಿದ್ದ ನಮ್ಮ ನೆರೆ ಅದಕ್ಕೆ ಸುರಕ್ಷಿತ ಅನಿಸಿರಬೇಕು.
ಬೆಳದಿಂಗಳ ಸುಂದರರಾತ್ರಿ.ಹದ್ದು ಮೀರಿದ ಮನಸು.ಮೇಲೆಕಾಣುವ ಪೂರ್ಣ ಚಂದಿರ. ನೀಲಾಗಸ.ಅಲ್ಲಲ್ಲಿ ಹಿಂಜಿದ ಹತ್ತಿಯಂತೆ ಕಾಣುವ ಮೊಡಗಳು. ತೇಲುವ ಚಂದಿರನಿಗೂ ತುಂಟಾಟ ವಾಡುವ ಬಯಕೆ. ಈಗ ಓಡುವ ಮೋಡವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಾನೆ. ಓಡುತ್ತಾ ಹಾಗೆಯೇ ಮೋಡದ ಸೆರಗಿನಲ್ಲಿ ಮಾಯವಾಗಿ ಬಿಟ್ಟ. ಒಮ್ಮೆಗೇ ಕಾಡೆಲ್ಲಾ ಮಂಕಾದಂತೆ ಭಾಸ. ಇದ್ದಕ್ಕಿದಂತೆ ಮೋಡದ ತುದಿಗಳಿಗೆ ಬೆಳ್ಳಿಕಟ್ಟು ಹೊಡೆದಂತೆ ಕಾಣುತ್ತಿದೆ. ನೋಡ್ ನೋಡುತ್ತಿದ್ದಂತೇ ಮೆಲ್ಲಗೆ ಹೊರಬಂದ ಚಂದಿರ. ಹಾಗೇ ನನ್ನ ಕಡೆ ನೋಡಿ ತುಂಟ ನಗೆ ನಕ್ಕ.ಹೌದು ಚಂದಿರನ ಹೆಂಡತಿ ಯಾರು? ತಾರೇನಾ?ಇಲ್ಲ ರೋಹಿಣಿನಾ? ಚಂದಿರನ ಪ್ರಭೆಗೆ ದೂರದಲ್ಲೆಲ್ಲೂ ಮಂಕಾಗಿ ಕಾಣುತ್ತಿದ್ದ ತಾರೆ.  ಇನ್ನು ರೋಹಿಣಿ ಯಾರು? ಬಹುಷಃ ಈಗ ತುಂಟಾಟವಾಡಿ ಬಂದ ಮೋಡವೇ ಅವನ ರೋಹಿಣಿಇರಬೇಕು.
ಹಾಗೇ ಮೆತ್ತಗೆ ಕಣ್ಣು ಮುಚ್ಚಿ ಅಂಗಾತ ಮಲಗಿದ್ದೆ. ಗಾಳಿಗೆ ನಾನು ಮಲಗಿದ್ದ ತೂಟ್ಟಿಲು ಮಲ್ಲಗೆ ತೂಗುತ್ತಿತ್ತು. ಗಾಳಿ ತಾಯ ಜೋಗುಳದಂತೆ ಅಪ್ಯಾಯವಾಗಿತ್ತು. ಒಮ್ಮೆಗೆ ಬೆಚ್ಚಿ ಬಿದ್ದೆ. ದೂರದಲ್ಲಿ ಆನೆಗಳು ಘೀಳಿಡುವ ಶಬ್ಧ. ಇಂದು ಬೆಳಿಗ್ಗೆ ಕಂಡಿದ್ದ ಕಾಡಾನೆಗಳ ಹಿಂಡು ಇಲ್ಲೇ ಬದಿಯಲ್ಲೇ ಬಂದಿರ ಬಹುದು. ಏನೋ ಮೈಯಲ್ಲಿ ನಡುಕ. ಹಾಗೇ ಕಣ್ಣು ಕಿರಿದು ಮಾಡಿಕೊಂಡು ಕಾಡಿನ ಕಡೆ ನೋಡಿದೆ. ಬೆಳದಿಂಗಳಲ್ಲಿ ದಟ್ಟವಾಗಿ ಬೆಳೆದ ಕಾಡು ಕಾಣುತ್ತಿದೆ. ಆನೆಗಳು ಘೀಳಿಡುವ ಸದ್ದು ಮತ್ತೂ ಹತ್ತಿರದಿಂದ ಬರುತ್ತಿದೆ. ಅದರ ಜೊತೆಯೆಲ್ಲೇ ಮತ್ತೆಂತದೂ ಆಳದಿಂದ ಬಂದಂತ ಗುಟುರು ದನಿ. ಬರಬರುತ್ತಾ ಆ ದನಿ ಇಲ್ಲೇ ಎಲ್ಲೋ ಹತ್ತಿರದಿಂದಲೇ ಬರುತಾ ಇದೆ. ಆಳಕ್ಕೆ ಇನ್ನೂ ಆಳಕ್ಕೆ ಇಳಿದಂತೆ ಮಂದ್ರದಲ್ಲೇ ಹರಿದು ಬರುತಾ ಇದೆ ಆ ಗುಟುರ ದನಿ. ಒಮ್ಮೆಗೇ ಆ ಗುಟುರ ದನಿ ನನ್ನ ಕಿವಿಯಲ್ಲೇ ತಿರುಗಿಸಿ ಹೊಡೆದಂತೆ ಆಯಿತು. ಕಣ್ಣಗಲಿಸಿ ನೋಡುತ್ತೇನೆ........ . ನನ್ನ ಮೈಯಲ್ಲಿ ನಡುಕ. ನನ್ನ ಎದೆ ನಗಾರಿಯಂತೆ ಹೊಡೆದುಕೊಳ್ಳುತ್ತಿದೆ. ತೊಟ್ಟಿಲಿನಿಂದ ಎದ್ದು ಹೋಗಲು ಪ್ರಯತ್ನಿಸುತ್ತೀನಿ. ಕಾಲುಗಳು ಕಲ್ಲಿನಂತೆ ಗಟ್ಟಿಯಾಗಿ ಬಿಟ್ಟಿದೆ. ತೊಟ್ಟಿಲಿನಿಂದ ಕಾಲು ಎತ್ತಲು ಆಗದೆ ಹಾಗೇ ಮರಗಟ್ಟಿ ಬಿಟ್ಟಿದೆ. ರಮೇಶಾ......ರೆಮೇಶಾ... ಎಂದು ಕೂಗ್ತೀನಿ. ದ್ವನಿ ಒಣಗಿ ಗಂಟಲಿನಿಂದ ಹೊರಗೆ ಬರಲೇ ಇಲ್ಲ.help ಅಂತ ಕಿರಿಚಲು ನೋಡಿದೆ. ಯಾರಾದರು ಸೆಕ್ಯೂರಿಟಿ ಗ್ರಾಡ್ಗ್ ಗಳು ಬರಬಹುದೆಂದು. ಇಲ್ಲ! ಬಯದಿಂದ ಜಂಘಾಭಲ ಉಡುಗಿಹೋಗಿ ನಿಶ್ಛೇತಳಾಗಿ ತೊಟ್ಟಿಲಿಗೇ ಅಂಟಿಕೊಂಡಿದ್ದೀನಿ. ಕೈ ಕಾಲೆಲ್ಲಾ ತಣ್ಣಗಾಗಿ ಬೆವರತಾ ಇದೆ.ಎದುರಿಗೆ ಅದೆ ಕಾಡೆಮ್ಮೆ ’ಭೀಮ’ (ಫಾರೆಸ್ಟ್ ಗಾರ್ಡ್ ಗಳು ಇಟ್ಟ ಹೆಸರು) ನಿಂತಿದ್ದಾನೆ. ಈ ಹಿಂದೆ ಇದೇ ಕಾಡೆಮ್ಮೆ ಭೀಮನೇ ಸಫಾರಿ ಗಾಡಿಯನ್ನು ಗುದ್ದಿ, ತನಗೆ ಅನ್ನ ಹಾಕುತ್ತಿದ್ದ ಒಬ್ಬ ಸಿಭಂದಿಯವನನ್ನೂ ತಿವಿದು ಸಾಯಿಸಿದ್ದ. ಈಗ ನನ್ನ ಬದಿಯಲ್ಲೇ ಇಲ್ಲೇ ಕೈ ಅಳತೆ ದೂರದಲ್ಲಿ. ಹೆದರಿಕೆಗೆ ಅಳು ಕೂಡಬರಲಿಲ್ಲ. ಇದು ನನ್ನ ಜೀವನದ ಕಟ್ಟಕಡೆಯ ರಾತ್ರಿ ಅನಿಸಿಬಿಟ್ಟಿತು. ಮಗ ತರುಣ್ ಮತ್ತು ಪತಿ ರಮೇಶರನ್ನು ಬಿಟ್ಟು ಹೋಗತೀನಿ ಅನಿಸಿತು. ಅವರ ನೆನಪಿನಿಂದ ಗಂಟಲು ಉಬ್ಬಿಬಂತು. ಅರೆ! ಅರೆರೆ!! ಇದೇನಿದು. ಈ ಕಾಡೆಮ್ಮೆ ಹೀಗೆ ಜೋರಾಗಿ ಗಾಳಿಗೆ ಅಲುಗಾಡತಾಇದೆ. ಎಲ್ಲೊ ಅಡಗಿದ್ದ ನನ್ನ ಪ್ರಜ್ನೆ ಕೆಲಸ ಮಾಡಲು ನೋಡಿತು. ಕಣ್ಣುಗಳನ್ನು ಕೀಳಿಸದೆ ನೋಡಿದೆ. ಬೆಳದಿಂಗಳ ಬೆಳಕಿನಲ್ಲಿ ಮರದ ನೆರಳು ಕಾಡೆಮ್ಮೆ ’ಭೀಮ’ನಂತೆ ನನಗೆ ಕಂಡಿತ್ತು. ಚಂದಿರ ನನ್ನ ಕಡೆ ನೋಡಿ ಕಿಸಕ್ಕೆಂದು ನಕ್ಕಿದ್ದ. ನನಗೆ ಸಿಟ್ಟು, ನಾಚಿಕೆ ಏಕಕಾಲದಲ್ಲೇ ಬಂತು. ನನ್ನ ಪುಕ್ಕಲು ತನ ಈ ಚಂದ್ರನಿಗೂ ತಿಳಿಯಿತಲ್ಲಾ ಅಂತ ನಾಚಿಕೆ ಮತ್ತು ನನ್ನ ಪುಕ್ಕಲುತನಕ್ಕೆ ನನ್ನ ಮೇಲೇ ನನಗೆ ಸಿಟ್ಟು.
ನಡುರಾತ್ರಿಯ ಸುರಿವ ಬೆಳದಿಂಗಳನ್ನು  ಮೊಗೆ ಮೊಗೆದು ಅನಿಭವಿಸುತ್ತಿದ್ದೆ. ಶುಭ್ರವಾದ ಆಗಸ. ಅಲ್ಲೊಂದೊ ಇಲ್ಲೊಂದು ಮುಗಿಲು. ಅಂಗಾತ ಮಲಗಿ ನೊಡುತ್ತಿದ್ದಂತೆ ಆ ಮೋಡಗಳು ಘಳಿಗೆಗೊಂದರಂತೆ ಒಂದೊಂದು ಆಕೃತಿ ಪಡಿತಾ ಇದೆ. ಒಮ್ಮೆ ಕೊಂಬುಗಳಿರುವ ರಕ್ಕಸನಂತೆ,ಒಮ್ಮೆ ಕೆದರಿದ ಕೂದಲಿನ ಬಿಕ್ಷುಕನಂತೆ, ಮತ್ತೊಮ್ಮೆ ಮಗುವನ್ನು ಎದೆಗವಚಿ ಮುದ್ದಿಸಿವ ತಾಯಂತೆ. ಮೋಡಗಳೇ ಹೀಗೆ. ನಾನಾರೂಪವನ್ನು ತಳೆದು ನನ್ನನ್ನು ರಂಜಿಸುತ್ತಿದೆ. ಇದ್ದಕ್ಕಿದ್ದಂತೆ ಒಂದು ದೊಡ್ಡಮೋಡಕ್ಕೆ ನೀಳ ಮೂಗು, ಕೋಲು ಮುಖ, ತೀಕ್ಷವಾದ ಕಣ್ಣುಗಳು ಆಷ್ಷೇ ಶಾಂತಿಯನ್ನು ಚೆಲ್ಲುವ ನೋಟ. ಆ ಆಕೃತಿ ನನ್ನನ್ನೇ ನೋಡುತ್ತಿದೆ. ಆ ಆಕೃತಿಯನ್ನು ಎಲ್ಲೂ ನೋಡಿದ ನೆನಪು. ಈಗ ನೆನಪಿಗೆ ಬಂತು. ಅದು ನನಗೆ ಬಾಲ್ಯದಿಂದಲೂ ಚಿರಪರಿಚಿತವಾದ, ಕರುಣಾಮಯವಾದ ಮುಖ. ಅದರಲ್ಲೇ ಲೀನವಾಗಿ ಬಿಟ್ಟೆ. ಆ ಮುಖ ನನ್ನ ತಂದೆ ಶ್ರೀನಿವಾಸ ಶಾಸ್ರಿಯವರದಲ್ವೇ? ಖ್ಯಾತ ಗಣಿತಜ್ನರಾಗಿದ್ದ ಅವರು ಬಿಡುವಿನ ಸಮಯದಲ್ಲಿ ವೇದ ಪಠನ ಮಾಡಿಕೊಳ್ಳುತ್ತಿದ್ದರು. ಈಗ , ಇಲ್ಲೇ, ಈ ಬೆಳದಿಂಗಳಿನ ನೀಲಾಕಾಶದಲ್ಲಿ ಜೋರಾಗಿ ಸ್ಪಷ್ಷವಾಗಿ ಹೇಳುತ್ತಿದ್ದಾರೆ “ ತದಾತ್ಮಾನಿ ನಿರತೇ ಯ ಉಪನಿಷತ್ಯು ಧರ್ಮಾಸ್ತೇ ಮಯಿ ಸಂತು ತೇ ಮಯಿ ಸಂತು. ಓಂ ಶಾಂತಿಃ ಶಾಂತಿಃ ಶಾಂತಿಃ”. ನನ್ನ ಆತ್ಮದಗಳಿಕೆಯಿಂದ ನನಗೆ ಆನಂದಾನುಭವ ಆಗಿರುವಾಗ್ ಅದು ನನ್ನಲ್ಲಿಯೇ ಇರುವಂತಾಗಲಿ. ಆನಂದವು ನನ್ನ ವಶದಲ್ಲೇ ಇರಲಿ..... ಶಾಂತಿಃ ಶಾಂತಿಃ ಶಾಂತಿಃ. ಈ ರಾತ್ರಿಯ ಈ ಬೆಳದಿಂಗಳನ್ನೇ ಅಲ್ಲವೇ ಎಲ್ಲರೂ tranquility, serenity ಪ್ರಶಾಂತತೆ ಅನ್ನುವುದು.ಉಹುಃ. ಇಲ್ಲ. ಇದಾವುದೂ ಅಲ್ಲ. ಇದು ಆನಂದದ ಸ್ಥಿತಿ.ಉಹೂ, ಇದೂ ಅಲ್ಲ. ಇದಕ್ಕೂ ಮಿಗಿಲಾದ ಪರಮಾನಂದದ ಸ್ಥಿತಿ. ಇದನ್ನೇ ಅಲ್ಲವೆ ಋಷಿ ಮುನಿಗಳು ವೇದಗಳಲ್ಲಿ ತಿಳಿಸಿದ ಪರಮ ಸುಖ. ಪರಮಸುಖದ ಅನುಭಾವ........
ನನ್ನ ತಲೆಯನ್ನು ಯಾರೊ ಮೃದುವಾಗಿ ನೇವರಿಸಿದಂತೆ ಆಯಿತು. ಕಣ್ಣು ಬಿಟ್ಟು ನೋಡುತ್ತೇನೆ. ಎಲ್ಲೆಲ್ಲೂ ಬೆಳಂಬೆಳಕು. ಬದಿಯಲ್ಲಿ ರಮೇಶ್ “ ಹೇಗಿತ್ತು ಒಬ್ಬಳೇ ಇದ್ದು ಕಳೆದ ಬೆಳದಿಂಗಳ ರಾತ್ರಿ? Adventurous by nature ಅಂತೇನೊ ಹೇಳಿದಂತೆ ಆಯಿತು.
ಲೇಖಕಿ: ಡಾ. ಹೆಚ್ ಎಸ್ ಪ್ರೇಮ.
ಡಯಟೀಶಿಯನ್,
ಬೆಂಗಳೂರು 560085